ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು
ಅದಕೆ ಹಿಮ್ಮೇಳವನೆ ಸೂಸಿ ಬಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತ್ತಿತ್ತು || ಒಂದು ||
ಇಳೆ ವೆಣ್ನು ಮೈದೊಳೆದು ಮಕರಂದದರಿಷಿನದಿ
ಹೂ ಮುಡಿದು ಮಧುಮಗಳ ಹೋಲುತ್ತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ||
ಹುಲ್ಲೆಸಳು ಹೂಕಪಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು || ಒಂದು ||
ತಳಿರ ತೋರಣದಲ್ಲಿ ಬಳ್ಳಿ ಬಾಣಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣದುಣಿತ ಹಾಕುತ್ತಿತ್ತು || ಒಂದು ||
ಉಷೆಯ ನುಂಟದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತ್ತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತ್ತಿತ್ತು || ಒಂದು ||
No comments:
Post a Comment