For proper results, open this webpage in Internet Explorer

Saturday, February 13, 2010

ಇದೋ ಗಂಗೋತ್ರಿ

ಇದೋ ಗಂಗೋತ್ರಿ ಹೇ ಮಾನಸ ಯಾತ್ರಿ ಇದು ನಕ್ಷತ್ರೇಕ್ಷು

ಸೂಸಿದ ರಸಧಾರಿಗೆ ಸಂಭವಿಸಿಹ ಶೃಂಗ ಸರೋವರ ಚಕ್ಷು || ಇದೋ ||




ಮಾನಸ ಅತಿಮಾನಸಕೇರುವೆಡೆ ಅತಿಮಾನಸ ಮನಸಕಿಳಿಯುವೆಡೆ

ಅಧಿಮಾನಸ ಮೈದೋರುವೆಡೆ ಹೇ ಈ ಗಂಗೋತ್ರಿ

ಭೂಮಂಡಲ ಶತ ಶತ ಆಕಾಂಕ್ಷಿ ನರ ನರ ಹೃದಯದ ಕೋಟಿ ಅಭೀಪ್ಸೆ

ಹರ ಚರಣಕೆ ಏರುವ ಊರ್ಧ್ವಾಷೆ ಈ ತೀರ್ಥ ಕ್ಷೇತ್ರಕೆ ಚಿರ ಯಾತ್ರಿ

ಎಲ್ಲ ತತ್ವಗಳ ಮೂಲನಿಧಿ ಎಲ್ಲ ಚಿಂತನದ ವಾರಿಧಿ ಎಲ್ಲ ನಂಬುಗೆಯ ಅಂಬೋಧಿ

ಈ ಮಧು ಗಂಗೋತ್ರಿ || ಇದೋ ||





ಯಮುನ ಗಂಗ ಕೃಷ್ಣ ತುಂಗ ಮಿಸ್ಸಿಸ್ಸಿಪ್ಪಿ ಅಮೇಜ಼ಾನ್ ಥೇಮ್ಸ್ ಡಾನ್

ಎಲ್ಲ ನದಿಗಳಿಗು ಇಲ್ಲಿಯೇ ಉಗಮ ಎಲ್ಲ ಸಮುದ್ರಗಳೆಲ್ಲ ಶಿಖರಗಳಿಗಿಲ್ಲಿಯೇ ಸಂಗಮ

ಈರುತ ಚಿದ್ಗಂಗೋತ್ರಿ ಇಲ್ಲಿಂದಲೇ ಸಂಭವಿಸುತ ಹರಿಯುತ್ತಿದೆ ಗಾಯತ್ರಿ

ಮರ್ತ್ಯ ಚೇತ ಸದಾ ಹೃದಯ ಹೃದಯದೊಳು ತಾನಾಗುವವರೆಗೂ ಚಿರ ಯಾತ್ರಿ || ಇದೋ ||





ಇದೇ ಮಧು ಗಂಗೋತ್ರಿ ಹೇ ಮಾನಸ ಯಾತ್ರಿ

ಧ್ಯಾನಿಸಿ ನಿಲ್ಲಿಲ್ಲಿ ಸಾಧಿಸಿ ನಿಲ್ಲಿಲ್ಲಿ

ಆ ಲೋಕವನೀ ಲೋಕಕೆ ಸೆಳೆವ ಭಗೀರಥನಾಗಿಲ್ಲಿ

ಈ ಲೋಕವನಾ ಲೋಕಕೆ ಸೇದುವ ಸೇತುವೆಯಾಗಿಲ್ಲಿ

ಅದನಿದಕು ಇದನದಕು ಬಂಧಿಸಿ ನೈದೊಂದಾಗಿಪ

ಋಷಿ ಮಾನವರಸ ಚೇತನ ವಿದ್ಯುತ್ವಾಹಕವಾಗಿಲ್ಲಿ || ಇದೋ ||



ನಾನು ಬಡವಿ ಆತ ಬಡವ

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು || ನಾನು ||




ಹತ್ತಿರಿರಲಿ ದೂರವಿರಲಿ ಅವನೇ ರಂಗಸಾಲೆ

ಕಣ್ಣು ಕಟ್ಟುವಂಥ ಮೂರ್ತಿ ಕಿವಿಗೆ ಮೆಚ್ಚಿನೋಲೆ || ನಾನು ||




ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು

ತೋಳುಗಳಿಗೆ ತೋಳಬಂಧಿ ಕೆನ್ನೆತುಂಬ ಮುತ್ತು || ನಾನು ||




ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು

ಹೊಟ್ಟೆಗಿತ್ತ ಜೀವಫಲವ ತುಟಿಗೆ ಹಾಲು ಜೇನು || ನಾನು ||

ಒಂದೇ ಬಾರಿ ನನ್ನ ನೋಡಿ

ಒಂದೇ ಬಾರಿ ನನ್ನ ನೋಡಿ ಮಂದನಗೆ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ ಹಿಂದ ನೋಡದ

ಗೆಳತಿ ಹಿಂದ ನೋಡದ || ಒಂದೇ ||




ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗು ಅಂದ

ಹೋತ ಮನಸು ಅವನ ಹಿಂದ

ಹಿಂದ ನೋಡದ || ಒಂದೇ ||




ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ

ಒಂದೇ ಅಳತಿ ನಡದದ ಚಿತ್ತ

ಹಿಂದ ನೋಡದ || ಒಂದೇ ||




ಸೂಜಿ ಹಿಂದ ದರದ್ಹಾಂಗ ಕೊಲ್ಲ್ಲದೊಳಗ ಜಾರಿದ್ಹಾಂಗ

ಹೋತ ಹಿಂದ ಬಾರದ್ಹಾಂಗ

ಹಿಂದ ನೋಡದ || ಒಂದೇ ||

ಬಾ ಸವಿತ

ಬಾ ಸವಿತಾ ಬಾ ಸವಿತಾ ಬಾ ಸವಿತಾ


ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ

ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ

ಒಳಿತಲ್ಲದುದೆ ಒಳಿತೆಂಬುದರ

ಚಳಕವೆಲ್ಲಕೆ ವಿನಾಶವ ತಾ || ಬಾ ||




ನೆಲೆಯಿಂದ ಹೊರಟು ಅಲೆ

ಛಲ ತೊಟ್ಟ ಮಲ್ಲ ವಾಹಿನಿ ಬಾ

ನಿಲವಿಲ್ಲಾ ಜಗದಿ ಕತ್ತಲೆಗೆಂದು

ಗೆಲವನು ಸಾರುವ ಭಾಸವ ತಾ || ಬಾ ||




ಓಂ ತತ್ ಸವಿತುರ್ವರೇಣ್ಯವೆಂದೆವು

ಅಂತಲ್ಲದೆ ಬೇರೇನನು ನಂಬೆವು

ಪಂಥವ ಬೆಳಗಿಸಿ ನಿರೂಪಿಸಿ ಕಾಂಬೆವು

ಶಾಂತ ಸುಂದರ ಶಿವದಾ ಸವಿತಾ || ಬಾ ||


ದೂರ ಬಹು ದೂರ

ದೂರ ಬಹು ದೂರ ಹೋಗುವ ಬಾರ

ಅಲ್ಲಿಹುದೆಮ್ಮ ಊರ ತೀರ || ದೂರ ||



ಜಲಜಲದಲೆಗಳ ಮೇಲ್ಕುಣಿದಾಡಿ

ಪಳಲಿಕೆ ತೊಳಲಿಕೆಗಳನೆಲ್ಲ ದೂಡಿ

ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ

ಆನಂದವ ತಾಳಿ || ದೂರ ||



ಹಿಮಮಣಿ ಕಣಗಣ ಸಿಂಚಿತ ಅಂಚಿನ

ಹಸುರಿನ ತೀರದ ಮೇಲಾಡಿ

ಇಸಲೆಯ ಕಂಪನದಿಂಪನು ನೋಡಿ

ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ ಬಾರ

ಅಲ್ಲಿಹುದೆಮ್ಮ ಊರ ತೀರ || ದೂರ ||

COMMENTS