For proper results, open this webpage in Internet Explorer

Saturday, June 6, 2009

ನಿನ್ನ ಬಾಂದಳದಂತೆ

ನಿನ್ನ ಬಾಂದಳದಂತೆ ನನ್ನ ಮನವಿರಲಿ

ನಿನ್ನ ಸಾಗರದಂತೆ ನನ್ನ ಎದೆಯಿರಲಿ || ನಿನ್ನ ||

ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ

ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ || ನಿನ್ನ ||

ನಿನ್ನ ಬಲವಿರುವಂತೆ ನನ್ನ ಬಲವಿರಲಿ

ನಿನ್ನ ತಿಳಿವಿರುವಂತೆ ನನ್ನ ತಿಳಿವಿರಲಿ || ನಿನ್ನ ||

ನಿನ್ನೊಲ್ಮೆಯಂದದಲಿ ನನ್ನೊಲ್ಮೆಯಿರಲಿ

ನಿನ್ನಳವೆನಗಿರಲಿ ನೀನೇ ನನಗಿರಲಿ || ನಿನ್ನ ||

ನಿನ್ನಾತ್ಮದಾನಂದ ನನ್ನದಾಗಿರಲಿ

ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ ||ನಿನ್ನ ||

ನಾನೇ ವೀಣೆ ನೀನೇ ತಂತಿ

ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ

ಮಿಡಿದ ನೆನಲು ರಸದ ಹೊನಲು

ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ || ನಾನೇ ||



ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ

ನನ್ನ ನಿನ್ನ ಹೃದಯ ಮೀನ

ಕಲ್ಲಿಜೇನ ಸೊಗದ ಸ್ನಾನ ಅಮೃತ ಪಾನ || ನಾನೇ ||



ತಂತಿ ಇಂಚರದಿ ವಿಪಂಚಿ ರಸ ಪ್ರಳಯಿಸೆ

ನನ್ನ ನಿನ್ನ ಜೀವ ಮಾನ

ತಾನ ತಾನ ತನನ ತಾನ ಪ್ರಾಣ ಪುಳಕಿಸೆ || ನಾನೇ ||

COMMENTS