For proper results, open this webpage in Internet Explorer

Thursday, May 15, 2008

ಈ ಬಾನು ಈ ಚುಕ್ಕಿ



ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ

ತೇಲಿ ಸಾಗುವ ಮುಗಿಲು ಹರುಷ ಉಕ್ಕಿ

ಯಾರು ಇಟ್ಟರು ಇವನು ಹೀಗೆ ಇಲ್ಲಿ

ತುದಿಮೊದಲು ತಿಳಿಯದೀ ನೀಲಿಯಲಿ || ಈ ಬಾನು ||



ಒಂದೊಂದು ಹೂವಿಗೂ ಒಂದೊಂದು ಬಣ್ಣ

ಒಂದೊಂದು ಜೀವಕೂ ಒಂದೊಂದು ಕಣ್ಣ

ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ

ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ || ಈ ಬಾನು ||



ನೂರಾರು ನದಿ ಕುಡಿದು ಮೀರದ ಕಡಲು

ಬೋರೆಂದು ಸುರಿ ಸುರಿದು ಆರದ ಮುಗಿಲು

ಸೇರಿಯೂ ಕೋಟಿ ತಾರೆ ತುಂಬದ ಬಯಲು

ಯಾರದೀ ಮಾಯೆ ಯಾವ ಬಿಂಬದ ನೆರಳು || ಈ ಬಾನು ||



ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ

ಹುಡುಕಿದರೆ ಕೀಲಿ ಕೈ ಸಿಗದೆ ಎದೆಯೊಳಗೆ

ತಿಳಿಯದಲೆದರಲ್ಲಿ ಕುಳಿತಿರುವೆ ನೀನೇ

ಎನ್ನುವರು ನನಗೀಗ ಸೋಜಿಗವು ನಾನೇ || ಈ ಬಾನು ||




ಒಂದು ಮುಂಜಾವಿನಲಿ


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು

ಅದಕೆ ಹಿಮ್ಮೇಳವನೆ ಸೂಸಿ ಬಹ ಸುಳಿಗಾಳಿ

ತೆಂಗು ಗರಿಗಳ ನಡುವೆ ನುಸುಳುತ್ತಿತ್ತು || ಒಂದು ||



ಇಳೆ ವೆಣ್ನು ಮೈದೊಳೆದು ಮಕರಂದದರಿಷಿನದಿ

ಹೂ ಮುಡಿದು ಮಧುಮಗಳ ಹೋಲುತ್ತಿತ್ತು

ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ

ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ||



ಹುಲ್ಲೆಸಳು ಹೂಕಪಳೆ ಮುತ್ತು ಹನಿಗಳ ಮಿಂಚು

ಸೊಡರಿನಲಿ ಆರತಿಯ ಬೆಳಗುತ್ತಿತ್ತು

ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು || ಒಂದು ||



ತಳಿರ ತೋರಣದಲ್ಲಿ ಬಳ್ಳಿ ಬಾಣಗಳಲ್ಲಿ

ದುಂಬಿಗಳ ಓಂಕಾರ ಹೊಮ್ಮುತ್ತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ

ಚಿಟ್ಟೆ ರಿಂಗಣದುಣಿತ ಹಾಕುತ್ತಿತ್ತು || ಒಂದು ||



ಉಷೆಯ ನುಂಟದಪಿನಲಿ ಹರ್ಷ ಬಾಷ್ಪಗಳಂತೆ

ಮರದ ಹನಿ ತಟಪಟನೆ ಉದುರುತ್ತಿತ್ತು

ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ

ಮುಂಬಾಳ ಸವಿಗನಸ ನೆನೆಯುತ್ತಿತ್ತು || ಒಂದು ||

Friday, May 9, 2008

ಬಾರೋ ವಸಂತ ಬಾರೋ




ಬಾರೋ ವಸಂತ ಬಾರೋ ಬಾ... ಬಾರೋ

ಹೊಸ ಹೊಸ ಹರುಷದ ಹರಿಕಾರ

ಹೊಸ ಭಾವನೆಗಳ ಹೊಸ ಕಾಮನೆಗಳ

ಎದೆಯಲಿ ಬರೆಯುವ ನುಡಿಕಾರ || ಬಾರೋ ||




ಬಾರೋ ಸಂತನೆಗಳ ಕಳಚಿ

ಹೆಜ್ಜೆಗಳಿಗೆ ತಾಳವನುಣಿಸಿ

ದಣಿದ ಮೈಗೆ ತಂಗಾಳಿಯ

ಮನಸಿಗೆ ನಾಳೆಯ ಸುಖದೃಶ್ಯವ ಕಲಿಸಿ || ಬಾರೋ ||




ಮೊಗಚುತ ನೆನ್ನೆಯ ದು:ಖಗಳ

ತೆರೆಯುತ ಹೊಸ ಅಧ್ಯಾಯಗಳ

ಅರಸುತ ಎಲ್ಲರ ಮೇಲು ಕೀಳಿರದೆ

ಕಲಿಸುತ ಭವಿಷ್ಯದಾಸೆಗಳ || ಬಾರೋ ||




ಎಳೆ ಕಂದನ ದನಿ ಗೆಜ್ಜೆಯಲಿ

ಇನಿಯಳ ಮಲ್ಲಿಗೆ ಲಜ್ಜೆಯಲಿ

ಗೋಳು ಬಾಳಿನಲಿ ಹಸಿರ ಚಿಮ್ಮಿಸುವ

ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||


Wednesday, May 7, 2008

ಸಂಜೆಯ ರಾಗಕೆ


ಸಂಜೆಯ ರಾಗಕೆ ಬಾನು ಕೆಂಪೇರಿದೆ

ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ

ಈಗ ರಂಗೇರಿದೆ || ಸಂಜೆಯ ||



ಮರಗಿಡ ನೆಲದ ಮೇಲೆ ನೆರಳನು ಹಾಸಿದೆ

ಹೂಗಳ ದಳಗಳ ನಡುವೆ ನಿನದೇ ಬೆರಳಿದೆ || ಸಂಜೆಯ ||



ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ

ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ || ಸಂಜೆಯ ||



ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ

ಕಣ್ಣಲಿ ಎಂತಹ ಕನಸಿನ ಲೋಕವು ತೆರೆದಿದೆ || ಸಂಜೆಯ ||


Monday, May 5, 2008

ಮತ್ತದೇ ಬೇಸರ

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ

ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||



ಕಣ್ಣನೇ ತಣಿಸುವ ಈ ಪಡುವಣ ಬಾನ್ ಬಣ್ಣಗಳು

ಮಣ್ಣನೇ ಹೊನ್ನಿನ ಕಣ್ಣಾಗಿಸುವೀ ಕಿರಣಗಳು

ಮತ್ತದೇ ಹಸುರಿಗೆ ಹಸೆಯಿಡುತಿರುವೀ ಪದಗಾನ

ಚಿನ್ನ ನೀನಿಲ್ಲದೆ ದಿಂ ಎನ್ನುತಿದೆ ರಮ್ಯೋದ್ಯಾನ || ಮತ್ತದೇ ||



ಆಸೆಗಳ ಹಿಂಡಿನ ತುಡಿತಕ್ಕೆ ಹೊಲ ನನ್ನೀ ದೇಹ

ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ

ಮುತ್ತಿಗಾಲಸ್ಯವ ಬಿಗಿ ಮೌನವ ಹೊಡೆದೋಡಿಸುವ

ಮತ್ತೆ ಆ ಸಮತೆಯ ಇರಿಬೇಲಿಯ ಸರಿ ನೆಲೆಸುವ || ಮತ್ತದೇ ||

ಜೋಗದ ಸಿರಿ ಬೆಳಕಿನಲ್ಲಿ


ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ

ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ || ಜೋಗದ ||



ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ

ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ

ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ

ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ || ಜೋಗದ ||



ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ

ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ || ಜೋಗದ ||

COMMENTS