For proper results, open this webpage in Internet Explorer

Sunday, April 20, 2008

ಅತ್ತಿತ್ತ ನೋಡದಿರು


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೇ

ಜೋ ಜೋಜೋಜೋ...

ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೇ

ಜೋ ಜೋಜೋಜೋ..



ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ

ಮಲಗು ತೊಟ್ಟಿಲ ಸಿರಿಯೆ ದೇವರಂತೆ

ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ

ಮಲಗು ಚಂದಿರನೂರ ಕೂಗುವೆಯಂತೆ || ಅತ್ತಿತ್ತ ||



ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ

ಚಂದಿರನ ತಂಗಿಯರು ನಿನ್ನ ಕರೆದು

ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ

ವೀಣೆ ನುಡಿಸುವರಂತೆ ಸುತ್ತ ನೆರೆದು || ಅತ್ತಿತ್ತ ||



ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ

ಚಿನ್ನದಂಬಾರಿಯಲಿ ನಿನ್ನ ಅಳುಕು ವರಾಮ

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ || ಅತ್ತಿತ್ತ ||



Monday, April 14, 2008

ಅಂತರ ತಮ ನೀ ಗುರು



ಅಂತರತಮ ನೀ ಗುರು

ಹೇ ಆತ್ಮ ತಮೋಹಾರಿ || ಅಂತರ ತಮ ||



ಜಟಿಲ ಕುಟಿಲ ತಮ ಅಂತರಂಗ

ಬಹು ಭಾವ ವಿಪಿನ ಸಂಚಾರಿ || ಅಂತರ ತಮ ||



ಜನುಮ ಜನುಮ ಶತ ಕೋಟಿ ಸಂಸ್ಕಾರ

ಪರಮ ಚರಮ ಸಂಸ್ಕಾರಿ || ಅಂತರ ತಮ ||



ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ

ರೂಪ ಅರೂಪ ವಿಹಾರಿ || ಅಂತರ ತಮ ||



ತಪ್ಪಿ ಹೋಯಿತಲ್ಲೇ


ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು

ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು

ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ

ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು || ತಪ್ಪಿ ||



ಹನಿ ಹನಿಯಾಗಿ ಕೊನೆಗೂ ಕೂಗಿದ ಪ್ರೀತಿ

ಹರಿದು ಚೂರಾಯಿತೆ ಎದೆಯ ಒಲವಿನ ಬೀಡು

ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ

ಹಾಡಿನ ಜಾಡು ಹಿಡಿಯುತ್ತಾ ನನ್ನ ಪಾಡು || ತಪ್ಪಿ ||



ಎಲ್ಲಿ ಹೋಯಿತು ವಲಸೆ ಗೂಡು ತೊರೆದ ಹಕ್ಕಿ

ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ನಾಡು

ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ

ಮುಂದೆ ಬಯಲು ಹಿಂದೆ ಬಿದ್ದಿತು ಕಾಡು ಮೇಡು || ತಪ್ಪಿ ||

Saturday, April 12, 2008

ತೊರೆದು ಹೋಗದಿರೊ ಜೋಗಿ

ತೊರೆದು ಹೋಗದಿರೊ ಜೋಗಿ

ಅಡಿಗೆರಗಿದ ಈ ದೀನಳ ಮರೆತು ಸಾಗುವೆ ಏಕೆ ವಿರಾಗಿ



ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷೆ ಎನಗೆ

ನಿನ್ನ ವಿರಹದಲಿ ಒರೆದು ಹೋಗಲು ಸಿದ್ಧಳಿರುವ ನನಗೆ || ತೊರೆದು ||



ಹೂಡುವೆ ಗಂಧದ ಚಿತೆಯ ನಡುವೆ ನಿಲುವೆ ನಾನೇ

ಉರಿ ಸೋಕಿಸು ಪ್ರಭುವೆ ಚಿತೆಗೆ ಪ್ರೀತಿಯಿಂದ ನೀನೇ || ತೊರೆದು ||



ಉರಿದು ಉಳಿವೆನು ಬೂಧಿಯಲಿ ಲೇಪಿಸಿಕೋ ಅದ ಮೈಗೆ

ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ || ತೊರೆದು ||




Monday, April 7, 2008

ಓ ನನ್ನ ಚೇತನ


ಓ ನನ್ನ ಚೇತನ ಆಗು ನೀ ಅನಿಕೇತನ



ರೂಪರೂಪಗಳನು ದಾಟಿ

ನಾಮ ಕೋಟಿಗಳನು ಮೀಟಿ

ಎದೆಯ ಬಿರಿಯೆ ಭಾವ ದೀಟಿ || ಓ ನನ್ನ ||



ನೂರು ಮತದ ಹೊಟ್ಟತೂರಿ

ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ || ಓ ನನ್ನ ||



ಎಲ್ಲಿಯೂ ನಿಲ್ಲದಿರು

ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು || ಓ ನನ್ನ ||



ಅನಂತ ತಾನನಂತವಾಗಿ

ಆಗುತಿಹನೆ ನಿತ್ಯಯೋಗಿ

ಅನಂತ ನೀ ಅನಂತವಾಗು

ಆಗು ಆಗು ಆಗು ಆಗು || ಓ ನನ್ನ ||






Sunday, April 6, 2008

ಎಲ್ಲಾ ನಿನ್ನ ಲೀಲೆ ತಾಯೆ


ಎಲ್ಲಾ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ

ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ || ಎಲ್ಲ ||



ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿ ಹರಳು

ನೀಲಿ ನಭದ ಹಾಸಿನಲ್ಲಿ ಮಣಿಗೇಯುವ ಇರುಳು

ಋತುವಿರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು || ಎಲ್ಲ ||



ಸಿಂಗಾರದ ನಡಿಗೆಯಲ್ಲಿ ನದಿಯ ರೀತಿ ಹರಿವೆ

ಮಂಗಳಮಯ ಶಾಲಿವನದ ಸೆರಗ ಹೊದ್ದು ನಿಲುವೆ

ಬಂಗಾರದ ಸಂಜೆಯಲ್ಲಿ ಒಂದೇ ಕ್ಷಣ ಸಿಳುವೆ || ಎಲ್ಲ ||

Saturday, April 5, 2008

ಕಾಣದ ಕಡಲಿಗೆ


ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ ಕಡಲೊಳು

ಕೂಡಬಲ್ಲೆನೆ ಒಂದು ದಿನ || ಕಾ ||



ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ

ನನ್ನ ಕಲ್ಪನೆಯು ತನ್ನ ಕಡಲನೆ ಛಿದ್ರಿಸಿ ಚಿಂತಿಸಿ ಸುರಿಯುತಿದೆ

ಎಲ್ಲಿರುವುದೋ ಅದು ಎಂತಿರುವುದೋ ಅದು

ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||



ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ

ಸುನಿಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ

ಮುನ್ನೀರಂತೆ ಅಪಾರವಂತೆ

ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||



ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು

ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆ ನೀನು

ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ ||

ಎಲ್ಲಿ ಜಾರಿತೋ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ


ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ || ಎಲ್ಲಿ ||



ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ

ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ || ಎಲ್ಲಿ ||



ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ

ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ || ಎಲ್ಲಿ ||



ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪೋ

ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ || ಎಲ್ಲಿ ||

Friday, April 4, 2008

ಯಾವ ಮೋಹನ ಮುರಳಿ ಕರೆಯಿತು



ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು

ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಯಾವ ||



ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ ಕರಣ ಕಣದಿ ರಿಂಗಣ || ಯಾವ ||



ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ

ಒಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ || ಯಾವ ||



ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು ಇದ್ದಕ್ಕಿದ್ದೆಡೆ ನಿನ್ನನ್ನು

ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು || ಯಾವ ||




ನೀ ಸಿಗದೆ


ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ

ನಾ ತಾಳಲಾರೆ ಈ ವಿರಹ ಕೃಷ್ಣ || ನೀ ||



ಕಮಲವಿಲ್ಲದ ಕೆರೆ ನನ್ನ ಬಾಳು

ಚಂದ್ರನಿಲ್ಲದ ರಾತ್ರಿ ಬೀಳು

ನೀ ಸಿಗದೆ ಉರಿ ಉರಿ ಕಳೆದೆ ಇರುಳ

ಮಾತೆಲ್ಲ ಬಿಗಿದಿದೆ ದು:ಖ ಕೊರಳ || ನೀ ||



ಅನ್ನ ಸೇರದು ನಿದ್ದೆ ಬಂದಿಹುದೆಂದು

ಕುದಿವೆ ಒಂದೇ ಸಮ ಕೃಷ್ಣ ಎಂದು

ಕೃಷ್ಣ ....

ಯಾರು ಅರಿವರೋ ಹೇಳು ನನ್ನ ನೋವ

ತಲ್ಲಣಿಸಿ ಕೂಗುತಿದೆ ದಾಸಿ ಜೀವ || ನೀ ||



ಒಳಗಿರುವ ಗಿರಿಧರನೇ ಹೊರಗೆ ಬಾರೋ

ಕಣ್ಣೆದುರು ನಿಂತು ಆ ರೂಪ ತೋರೋ

ಜನುಮ ಜನುಮದ ರಾಗ ನನ್ನ ಪ್ರೀತಿ

ನಿನ್ನೊಳಗೆ ಹರಿವುದೇ ಅದರ ರೀತಿ || ನೀ ||

Thursday, April 3, 2008

ಎದೆ ತುಂಬಿ ಹಾಡಿದೆನು


ಎದೆ ತುಂಬಿ ಹಾಡಿದೆನು ಅಂದು ನಾನು

ಮನವಿಟ್ಟು ಕೇಳಿದಿರಿ ಅಲ್ಲಿ ನೀವು || ಎದೆ ||



ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ || ಎದೆ ||



ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆನದರಿಂದ

ಹಾಡುವೆನು ಮೈದುಂಬಿ ಎಂದಿನಂತೆ

ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ



ಎದೆ ತುಂಬಿ ಹಾಡಿದೆನು ಇಂದು ನಾನು

ಮನವಿಟ್ಟು ಕೇಳಿದಿರಿ ಇಲ್ಲಿ ನೀವು..


ಅಮ್ಮ ನಾನು ದೇವರಾಣೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ


ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ || ಅಮ್ಮ ||



ನೀನೇ ನೋಡು ಬೆಣ್ಣೆ ಗಡಿಗೆ ಸೂಲಿನ ನೆಲುವಲ್ಲಿ

ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮ ||



ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ

ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ || ಅಮ್ಮ ||



ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ

ಸೂರದಾಸ ಪ್ರಿಯಶಾಮನ ಶಾಮನ ...

ಸೂರದಾಸ ಪ್ರಿಯಶಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮ ||


Wednesday, April 2, 2008

ನೀನಿಲ್ಲದೆ ನನಗೇನಿದೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ



ನೀನಿಲ್ಲದೆ ನನಗೇನಿದೆ

ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ

ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ || ನೀ ||



ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು

ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು

ಎದೆಯಾಸೆ ಏನು ಎಂದು ನೀ ಕಾಣದಾದೆ

ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ

ಬೆಳಕೊಂದೆ ನಿನ್ನಿಂದ ನಾ ಬಯಸಿದೆ || ನೀ ||



ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ

ಒಳಗಿರುವ ಎದೆ ನೆಲದಲ್ಲಿ ಭರವಸೆಯ ಜೀವ ಹರಿಸಿ

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು

ಹೊಸ ಜೀವ ನಿನ್ನಿಂದ ನಾ ತಾಳುವೆ

ಹೊಸ ಲೋಕ ನಿನ್ನಿಂದ ನಾ ಕಾಣುವೆ || ನೀ ||


Tuesday, April 1, 2008

ಅಂತರಂಗದ ಮೃದಂಗ



ಅಂತರಂಗದ ಮೃದಂಗ ಅಂತು ತೋಂ ತನಾನ

ಚಿತ್ತ ತಾಳ ಬಾರಿಸುತಲಿದ್ದು ಝಂ ಝಣಣ ನಾ

ನೆನಪು ತಂತಿ ಮೀಟುತಿತ್ತು ತೋಂತನನ ತಾನ ತೋಂತನನ ತಾನ ತೋಂತನನ ತಾನ ನ



ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ

ಏಕನಾದದಂಥದೊಂದು ತಾನದ ವಿತಾನ

ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ || ೩ || || ಅಂ ||



ಕಲ್ಪದಾದಿಯಲ್ಲಿ ನನ್ನ ನಿನ್ನ ವಿರಹವಾಗಿ

ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ

ಮರೆವೆಗೊಂದು ಬಿದ್ದೆ ನಾನು ನೆಲದ ಮಣ್ಣು ತಾಗಿ || ೩ || || ಅಂ ||



ಕತ್ತಲಲ್ಲಿ ಬೆಳಕು ಮಿಂಚಿ ಪಡೆತಿತೇಳು ಬಣ್ಣ

ಮೂಕ ಮೌನ ತೂಕ ಮೀರಿ ದನಿಯು ಹಬ್ಬಿತಣ್ಣ

ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ || ೩ || || ಅಂ ||

COMMENTS